ಇತ್ತಲೆಮುಂಡ-
ಆಫ್ರಿಕ, ಸ್ಪೇನ್, ಉತ್ತರ ಅಮೆರಿಕ, ಮೆಕ್ಸಿಕೊ, ದಕ್ಷಿಣ ಅಮೆರಿಕ ಮುಂತಾದ ದೇಶಗಳಲ್ಲಿ ಹೇರಳವಾಗಿರುವ ಆಂಫಿಸ್ಬೇನ ಎಂಬ ಒಂದು ಸರೀಸೃಪ. ಹೆಂಟೆಗೊದ್ದ, ಹಲ್ಲಿ, ಊಸರವಳ್ಳಿಗಳಂತೆ ಹಲ್ಲಿಗಳ ಗುಂಪಿಗೆ ಇದನ್ನು ಸೇರಿಸಲಾಗಿದೆ. ಹಗ್ಗದಂತೆ ದುಂಡಾಗಿರುವ ಶರೀರ ನೋಟಕ್ಕೆ ಹಾವಿನಂತೆ ಕಾಣುತ್ತದೆ. ಆದರೆ ಇದಕ್ಕೂ ಹಾವುಗಳಿಗೂ ಯಾವ ಸಂಬಂಧವೂ ಇಲ್ಲ. ಇದು ಹಿಂದಕ್ಕೂ ಮುಂದಕ್ಕೂ ಚಲಿಸಬಲ್ಲದು. ಇದಕ್ಕೆ ಒಂದೇ ತಲೆ ಇದ್ದರೂ 

ಚಿತ್ರ ಬಿಟ್ಟಿದೆ

ತಲೆ ಮತ್ತು ಬಾಲದ ತುದಿ ಎರಡೂ ಒಂದೇ ಗಾತ್ರ ಮತ್ತು ಆಕಾರವನ್ನು ಹೊಂದಿರುವುದರಿಂದ ಎರಡು ತಲೆ ಹಾವೆಂದು ತಿಳಿದಿದ್ದಾರೆ. ಹಾವಿನಂತೆ ಕಾಲಿಲ್ಲದ ಪ್ರಾಣಿ. ಆದರೆ ಚಲನೆ ಮಾತ್ರ ಹಾವಿನಂತಲ್ಲ, ಹಲ್ಲಿಯಂತೆ. ಆದರೆ ಹಲ್ಲಿಗಳಿಗೆ ಮುಖ್ಯವಾಗಿ ಇರಬೇಕಾದ ಫಲಕಗಳು ಇದರಲ್ಲಿ ಕಾಣಬರುವುದಿಲ್ಲ. ಎಡಭಾಗದ ಶ್ವಾಸಕೋಶ ಮಾತ್ರ ಇದೆ. ಕಣ್ಣುಗಳು ಕ್ಷಯಿಸಿ ಹೋಗಿವೆ. ಹೊರಕಿವಿ ಇಲ್ಲ. ಕಾಲುಮೂಳೆಗಳು ಮತ್ತು ಅವಕ್ಕೆ ಸಂಬಂಧಪಟ್ಟ ಭುಜದ ಮತ್ತು ಸೊಂಟದ ಕಟ್ಟಿನ ಮೂಳೆಗಳು ನಶಿಸಿಹೋಗಿವೆ. ಭೂಮಿಯ ಒಳಗೆ ವಾಸಮಾಡುವ ಪ್ರವೃತ್ತಿಯೇ ಇದಕ್ಕೆ ಕಾರಣ.  ವರೆಗೆ ಉದ್ದವಾಗಿರುತ್ತದೆ. ವಾಸ ಬಿಲಗಳಲ್ಲಿ. ಅದರಲ್ಲೂ ಇರುವೆಗೂಡು ಮತ್ತು ಗೆದ್ದಲಿನ ಹುತ್ತಗಳಲ್ಲಿ ವಾಸಿಸುವುದು ಹೆಚ್ಚು. ಇರುವೆ ಗೆದ್ದಲುಹುಳುಗಳ ಕಡಿತವನ್ನು ಸಹಿಸಿಕೊಳ್ಳುವ ಧಾರಣಶಕ್ತಿ ಇದಕ್ಕೆ ಇರುವುದರಿಂದ ಆ ಗೂಡುಗಳಲ್ಲಿ ವಾಸಿಸಬಲ್ಲುದು. ಅಷ್ಟೇ ಅಲ್ಲ, ಇರುವೆ ಗೆದ್ದಲುಗಳನ್ನು ತಿಂದು ಅವುಗಳ ಗೂಡುಗಳನ್ನು ತನ್ನ ಆಹಾರ ಶೇಖರಣೆಗೂ ತತ್ತಿಗಳನ್ನು ಕಾಪಾಡುವುದಕ್ಕೂ ಇದು ಉಪಯೋಗಿಸುತ್ತದೆ.							
(ಜಿ.ಎಂ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ